ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವರಸಿದ್ಧಿ ವಿನಾಯಕ ಪದವಿ ಪೂರ್ವ ಕಾಲೇಜು ಕೆರಾಡಿ ಇದರ 2022-23ನೇ ವಾರ್ಷಿಕ ಕ್ರೀಡಾಕೂಟದ ಉದ್ಘಾಟನೆ ಕಾಲೇಜಿನ ಸಂಸ್ಥಾಪಕರು, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಹೊಸೂರು ಇದರ ದೈಹಿಕ ಶಿಕ್ಷಕರಾದ ರವಿ ಶಂಕರ್ ಹೆಗ್ಡೆ ಅವರು ದೀಪಬೆಳಗಿ, ಕ್ರೀಡಾ ಜ್ಯೋತಿಗೆ ಚಾಲನೆ ನೀಡುವುದರ ಮೂಲಕ ಉದ್ಘಾಟಿಸಿದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಡೆ ವಿದ್ಯಾರ್ಥಿಯ ದೈಹಿಕ, ಮಾನಸಿಕ ಮತ್ತು ಆತ್ಮಸ್ಥೈರ್ಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ, ಸುಂದರ ಪ್ರಾಕೃತಿಕ ವಾತಾವರಣ ಹೊಂದಿರುವ ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಬೆಳವಣಿಗೆಗೆ ಪೂರಕವಾಗಿದೆ ಎಂದು ಉದ್ಘಾಟನಾ ನುಡಿಗಳನ್ನಾಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಕೊಡ್ಲಾಡಿ ಇದರ ದೈಹಿಕ ಶಿಕ್ಷಕರಾದ ಸಂತೋಷ್ ಕುಮಾರ್ ಶೆಟ್ಟಿ ಇವರು ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾಗವಹಿಸಿಕೆ ಮತ್ತು ಇತರೆ ಸ್ಪರ್ಧಾಳುಗಳನ್ನು ಮಾನವೀಯ ಮೌಲ್ಯದಿಂದ ಗೌರವಿಸುವುದು ಮುಖ್ಯ ಎಂದು ಹಿತನುಡಿಗಳನ್ನಾಡಿದರು.
ಇರ್ವರು ಮುಖ್ಯ ಅತಿಥಿಗಳನ್ನು ಸನ್ಮಾನಿಸಿದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಕೆರಾಡಿ ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ವ್ಯಕ್ತಿತ್ವ ವಿಕಸನ ಬಹುಮುಖ್ಯ, ಸ್ಪರ್ಧೆಯಲ್ಲಿ ಸೋಲುವುದರಿಂದಲೂ ಕಲಿಯುವುದು, ಕಲಿಯುತ್ತಾ ಗೆಲ್ಲುವುದು ಆ ಮೂಲಕ ಅನುಭವ ಪಡೆದುಕೊಳ್ಳುವುದು ಸಾಕಷ್ಟಿದೆ ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವುದರ ಮೂಲಕ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಆರ್ ಸ್ವಾಗತಿಸಿದರು, ಕಾಲೇಜು ಆಡಳಿತ ನಿರ್ದೇಶಕರು ಹಾಗು ದೈಹಿಕ ಶಿಕ್ಷರಾದ ಪ್ರದೀಪ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಆಡಳಿತ ನಿರ್ದೇಶಕರಾದ ಡಾ. ಮಂಜುನಾಥ ಗಾಣಿಗ, ಸುನೀಲ್ ಚಿತ್ತಾಲ್, ಕಾರ್ತಿಕೇಯ ಎಂ ಎಸ್, ದೈಹಿಕ ಶಿಕ್ಷಕರಾದ ಶರತ್ ಟಿ.ಆರ್, ದಿನೇಶ್ ಉಪಸ್ಥಿತರಿದ್ದರು.
ಉಪಪ್ರಾಂಶುಪಾಲರಾದ ಅರುಣ್ ಶೆಟ್ಟಿ ವಂದಿಸಿದರು, ಉಪನ್ಯಾಸಕಿ ರಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.