ಬಸ್ರೂರು: ಶಿಕ್ಷಣ ಸಂಸ್ಥೆಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು – ಅಪ್ಪಣ್ಣ ಹೆಗ್ಡೆ ಹುಟ್ಟುಹಬ್ಬದಲ್ಲಿ ಪ್ರೊಫೆಸರ್ ನಾವಡ

0
400

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶಿಕ್ಷಣ ಸಂಸ್ಥೆಗಳು ಸಾಂಸ್ಕೃತಿಕ ಮತ್ತು ಅಧ್ಯಯನ ಕೇಂದ್ರಗಳಾಗಿ ಬೆಳೆಯಬೇಕು. ಆಗ ಮಾತ್ರವೇ ಯುವ ಜಗತ್ತು ಅಧ್ಯಯನಶೀಲವಾಗಿರಲು ಸಾಧ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎ.ವಿ ನಾವಡ ಹೇಳಿದರು.

ಶನಿವಾರ ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ವತಿಯಿಂದ ಜರುಗಿದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ 88ನೇ‌ ಹುಟ್ಟುಹಬ್ಬ ಆಚರಣೆ, ದತ್ತಿನಿಧಿ ವಿತರಣೆ ಮತ್ತು ಪ್ರಶಸ್ತಿ‌ಪ್ರಧಾನ ಸಮಾಂಭದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಮ್ಮ‌ ಸಂಸ್ಕೃತಿ, ಭಾಷೆಗಳಲ್ಲಿ ಬದಲಾವಣೆಗಳಾಗುತ್ತಿದೆ. ಈ ನೆಲದ ಸಂಸ್ಕೃತಿ ಹಾಗೂ ಪ್ರಕೃತಿ ಕೊಡುವ ಸಂಸ್ಕೃತಿಗಳು ಕಣ್ಮರೆಯಾಗುತ್ತಿದೆ. ವಿದ್ಯಾರ್ಥಿಗಳು ನೆಲದ‌ ಸಂಸ್ಕೃತಿಯ‌ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಧರ್ಮ ಮತ್ತು ಸಮಾಜದ ಸಂಬಂಧಗಳು ಅಪಾಯದ ದಾರಿಯಲ್ಲಿ ನಡೆಯುತ್ತಿದೆ. ಧರ್ಮವನ್ನು ಅಪಾರ್ಥ ಮಾಡಿಕೊಂಡು ಜನರು ಬದುಕುತ್ತಿದ್ದಾರೆ ಎಂದರು.

Click Here

Click Here

ಸುಮಾರು 10ಲಕ್ಷ‌ ಮಂದಿ ಕುಂದಗನ್ನಡ ಭಾಷೆಯನ್ನು ಆಡುತ್ತಾರೆ. ಹೀಗಾಗಿ ಕುಂದಗನ್ನಡ ಭಾಷೆ ಅಕಾಡೆಮಿ ಆಗಲೇಬೇಕು.‌ ಅಕಾಡೆಮಿ‌‌ ಸ್ಥಾಪನೆಯಾದರೆ ಅಧ್ಯಯನಕ್ಕೆ ಅವಕಾಶಗಳಾಗುತ್ತವೆ. ಅದಕ್ಕಾಗಿ ಹಕ್ಕೊತ್ತಾಯ ಆಗಲೇಬೇಕು ಎಂದು ನಾವಡ ಹೇಳಿದರು.

ಕೇಮಾರು‌‌ ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ‌ ಮಾತನಾಡಿ, ನೈತಿಕ ಶಿಕ್ಷಣದ ವ್ಯವಸ್ಥೆ ಕಣ್ಮರೆಯಾಗುತ್ತಿದೆ. ಮಕ್ಕಳಿಗೆ ಸಂಸ್ಕಾರ‌ ಕೊಡಿಸುವ ಕೆಲಸ‌ ಆಗಬೇಕು. ಬ್ರಿಟೀಷರು 200 ವರ್ಷ ಆಳಿದರೂ ನಾಶ ಮಾಡಲಾಗದ ನಮ್ಮ ಭವ್ಯ ಸಂಸ್ಕೃತಿಗಳನ್ನು ಸಾಮಾಜಿಕ ಜಾಲಾತಾಣಗಳು ನಾಶ ಮಾಡುತ್ತಿದೆ. ಸೋಶಿಯಲ್‌ ಮೀಡಿಯಾ ಇಂದು ನಮ್ಮ‌ ಇಡೀ ಸಂಸ್ಕೃತಿಯನ್ನು ನಾಶ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ್ ರೈ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ರಾಜ್ಯ ಆಹಾರ ಹಾಗೂ ನಾಗರಿಕ ಸೌಲಭ್ಯ ನಿಗಮದ ಉಪಾಧ್ಯಕ್ಷ ಕಿರಣ್‌ಕುಮಾರ ಕೊಡ್ಗಿ ಅವರು ಬಸ್ರೂರು ಅಪ್ಪಣ್ಣ ಹೆಗ್ಡೆಯವರನ್ನು ಅಭಿನಂದಿಸಿದರು.

ಶ್ರೀ ಶಾರದಾ ಪದವಿ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜು, ಗುರುಕುಲ ಪಬ್ಲಿಕ್ ಸ್ಕೂಲ್, ಹಿಂದೂ ಹಿ. ಪ್ರಾ. ಶಾಲೆ ಬಸ್ರೂರು, ನಿವೇದಿತಾ ಪ್ರೌಢಶಾಲೆಯ ವತಿಯಿಂದ ಗೌರವಾರ್ಪಣೆ ನಡೆಯಿತು. ಪ್ರತಿಷ್ಠಾನದಿಂದ ವಿದ್ಯಾರ್ಥಿಗಳಿಗೆ, ಅಶಕ್ತರಿಗೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಹಾಯಧನ ಹಸ್ತಾಂತರಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ರಾಮ್ ಕಿಶನ್ ಹೆಗ್ಡೆ ವರದಿ ವಾಚಿಸಿದರು. ಸುನೀಲ್ ಪಾಂಡೇಶ್ವರ ಸನ್ಮಾನ ಪತ್ರ ವಾಚಿಸಿದರು. ಅನುಪಮಾ ಎಸ್ ಶೆಟ್ಟಿ ಸ್ವಾಗತಿಸಿದರು‌. ರಾಜೇಶ್ ಕೆ.ಸಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here